ರೋಬಾಟ್
ಮನುಷ್ಯನ ಸೃಷ್ಟಿಯ ಹಂಬಲದ ಯಶಸ್ವೀ ಪ್ರತಿರೂಪ ರೋಬಾಟ್. ಇದು ಮನುಷ್ಯನ ನೇರ ನಿಯಂತ್ರಣವಿಲ್ಲದೆ ಸ್ವತಂತ್ರವಾಗಿ ಮನುಷ್ಯನಂತೆ ದುಡಿಯಬಲ್ಲ ಒಂದು ಸ್ವಯಂಚಾಲಿತ ಯಂತ್ರ. ದಿನನಿತ್ಯ ಮನೆಗಳಲ್ಲಿ ಬಳಸುವ ಬಟ್ಟೆ ಒಗೆಯುವ ಯಂತ್ರವು ರೋಬಾಟಿನ ಒಂದು ರೂಪವಾಗಿದ್ದರೆ, ಅಂತರಿಕ್ಷ ಶೋಧಕಗಳೂ ರೋಬಾಟಿನ ಮತ್ತೊಂದು ರೂಪವಾಗಿವೆ. ಆದ್ದರಿಂದ ಸ್ವಯಂಚಾಲಿತ ವಿಮಾನಗಳು, ಕ್ಷಿಪಣಿಗಳೆಲ್ಲವೂ ರೋಬಾಟ್‍ಗಳೇ ಆಗಿವೆ.

ಜಗತ್ತಿನಲ್ಲೇ ಮೊಟ್ಟಮೊದಲ ಬಾರಿಗೆ ಜಪಾನ್‍ನ ಎಫ್.ಎಫ್.ಪಿ. ಕಾರ್ಖಾನೆಯಲ್ಲಿ ಮನುಷ್ಯರೇ ಇಲ್ಲದೆ, ಪೂರ್ಣ ರೋಬಾಟುಗಳನ್ನೇ ಅಳವಡಿಸಲಾಗಿತ್ತು. 1979ರಲ್ಲಿ ತಯಾರಿಸಲಾದ ರೋವರ್ ಎಂಬ ದೂರಸ್ಥಳ ಶೋಧಕ ವಾಹನವೂ ಒಂದು ರೋಬಾಟ್. ಇದು ತನ್ನ ದೂರದರ್ಶನ ಕ್ಯಾಮೆರಾ ಕಣ್ಣುಗಳ ಮೂಲಕ ವಿಕಿರಣದ ಮಟ್ಟವನ್ನು ಅಳತೆ ಮಾಡಿ, ಛಾಯಾಚಿತ್ರಗಳನ್ನು ಸೆರೆಹಿಡಿಯಬಲ್ಲದು.

ಚಂದ್ರ-ಮಂಗಳಗಳ ಮೇಲೆ ಕಾಲಿರಿಸಿರುವ ರೋಬಾಟ್‍ಗಳು ಅಲ್ಲಿಯ ಚಿತ್ರ ತೆಗೆದು, ಮಣ್ಣನ್ನು ಹೆಕ್ಕಿ ಪರಿಶೀಲನೆಗಾಗಿ ಭೂಮಿಗೆ ರವಾನಿಸಿವೆ.

ಹೀಗೆ ಬಹಳಷ್ಟು ನಿಖರತೆ, ನಿಪುಣತೆಗಳನ್ನು ನಿರೀಕ್ಷಿಸುವ ಕಾರ್ಖಾನೆಗಳಿಗೆ, ಮನುಷ್ಯನಿಂದ ಅಸಾಧ್ಯವಾದ ಅಪಾಯಕಾರಿ ಕೆಲಸಗಳಿಗೆ ಹಾಗೂ ಅಂತರಿಕ್ಷ ಶೋಧಕಗಳಿಗೆ ರೋಬಾಟ್ ಅನಿವಾರ್ಯವಾಗಿದೆ.

ರೋಬಾಟ್‍ಗಳ ಇತಿಹಾಸ ಬಹಳ ಆಸಕ್ತಿಯುತವಾದದ್ದು. 1770ರಲ್ಲಿ ಕಂಡು ಹಿಡಿದ ಹಕ್ಕಿವಾದ್ಯ ಈ ದಿಕ್ಕಿನ ಸಂಶೋಧನೆಗಳಲ್ಲಿ ಪ್ರಮುಖವಾದುದು. ಈ ಹಕ್ಕಿವಾದ್ಯದ ಬೊಂಬೆಯನ್ನು ರೆಕ್ಕೆ ಬಡಿಯುವಂತೆ ಮತ್ತು ಸದ್ದು ಮಾಡುವಂತೆ ತಯಾರಿಸಿದ್ದರು. 1805ರಲ್ಲಿ ಹೆನ್ರಿ ಮೆಲಾರ್‍ಡೆಟ್‍ನ ಚಿತ್ರ ಮತ್ತು ಕವಿತೆ ಬರೆವ ಸ್ವಯಂಚಾಲಿತ ಯಂತ್ರದ ಬೊಂಬೆ ಬಹಳ ಪ್ರಸಿದ್ಧವಾಯಿತು. ಹೆಣ್ಣು ಬೊಂಬೆಯ, ಲೇಖನಿ ಹಿಡಿದ ಕೈ ಸುಂದರವಾದ ಸವಿವರವಾದ ಚಿತ್ರವನ್ನು ಬರೆಯುತ್ತಿತ್ತು. 

ಶ್ರೇಷ್ಠ ವೈಜ್ಞಾನಿಕ ಕತೆಗಾರ ಐಸಾಕ್ ಆಸಿಮೋ ರೋಬಾಟ್ ನಾಮಪದವನ್ನು ರೋಬಾಟಿಕ್ ಎಂದು ನಾಮಕರಣ ಮಾಡಿದ. ರೋಬಾಟ್ ಬಗೆಗಿನ ಅವನ ಮೂರು ನಿಯಮಗಳು ಹೀಗಿವೆ : 
1.   ರೋಬಾಟ್ ಮನುಷ್ಯನಿಗೆ ಕೇಡು ತರಬಾರದು; ಅಪಾಯ ಮಾಡಬಾರದು.

2. ರೋಬಾಟ್‍ಗಳು ಮನುಷ್ಯನಿಗೆ ವಿಧೇಯವಾಗಿ ನಡೆದುಕೊಳ್ಳಬೇಕು. ಮೊದಲ ನಿಯಮಕ್ಕೆ ಧಕ್ಕೆ ಬರುವಾಗ ಅವಿಧೇಯರಾಗಬಹುದು.

3. ಮೊದಲ ನಿಯಮಕ್ಕೆ ಧಕ್ಕೆ ಬರದಿದ್ದಾಗ ರೋಬಾಟ್‍ಗಳು ತಮ್ಮನ್ನು ತಾವು ಸುರಕ್ಷಿತವಾಗಿ ನೋಡಿಕೊಳ್ಳಬೇಕು.

	ಪ್ರಾರಂಭಿಕ ಹಂತದಲ್ಲಿ ಹೆಚ್ಚಿನ ರೋಬಾಟ್‍ಗಳು ಕೈ ರೂಪದಲ್ಲಿದ್ದರೂ, ಅನಂತರದ ರೋಬಾಟ್‍ಗಳಿಗೆ ಸಮತಟ್ಟು ನೆಲದಲ್ಲಿ ನಡೆಯಲು ಗಾಲಿಗಳನ್ನು ಅಳವಡಿಸಲಾಯಿತು. ಉಬ್ಬು-ತಗ್ಗಿನ ನೆಲದ ಮೇಲೆ ನಡೆಯಲು ನಾಲ್ಕು ಅಥವಾ ಆರು ಕಾಲುಗಳನ್ನಳವಡಿಸಿದ ಯಶಸ್ವೀ ಪ್ರಯೋಗಗಳೂ ಇವೆ. ಮನುಷ್ಯನಂತೆ ನಡೆದಾಡಲು ಹಾಗೂ ಸೂಕ್ತ ಕ್ರಿಯೆಗಳನ್ನು ಮಾಡಲು ಕೈ-ಕಾಲುಗಳೇನೋ ರೋಬಾಟ್‍ಗಳಿಗೆ ದೊರಕಿದವು. ಆದರೆ ಯಾವುದೇ ವಸ್ತುಗಳನ್ನು ಗುರುತಿಸಲು ರೋಬಾಟ್‍ಗೆ ದೂರದರ್ಶನದಂತಹ ಕ್ಯಾಮರಾ ಕಣ್ಣುಗಳು ಅವಶ್ಯಕ. ರೋಬಾಟ್‍ನ ಕಣ್ಣುಗಳು ಯಾವುದೇ ಸಾಮಾನಿನ ತುದಿಗಳಲ್ಲಿ ಅಥವಾ ರಸ್ತೆಯ ಅಂಚಿನಲ್ಲಿ ಬೆಳಕಿನಿಂದ ನೆರಳಿಗೆ ಆಗುವ ಬದಲಾವಣೆಯನ್ನು ಹುಡುಕಿ, ಪದಾರ್ಥವನ್ನು ಗುರುತಿಸುತ್ತವೆ. ಜೊತೆಗೆ ರೋಬಾಟ್‍ಗಳಿಗೆ ಕಿವಿಗಳನ್ನು ಅಳವಡಿಸುವ ಸಾಹಸವನ್ನೂ ಮಾಡಲಾಗಿದೆ. ಇವು ಸೋನಾರ್ ಶಾಬ್ದಿಕ ತರಂಗಗಳನ್ನು ಚಿಮ್ಮಿಸಿ, ಗೋಡೆ ಇಲ್ಲವೇ ಪದಾರ್ಥಗಳಿಂದ ಪ್ರತಿಫಲಿತ ಶಾಬ್ದಿಕ ಸಂಕೇತವನ್ನು ಪರಿಶೋಧಿಸಿ ದಿಕ್ಕು, ದೂರವನ್ನು ಅಳತೆ ಮಾಡುತ್ತದೆ. ಈ ರೀತಿ ಕಣ್ಣು-ಕಿವಿಗಳಂತೆ ರೋಬಾಟ್‍ಗೆ ಸ್ಪರ್ಶಾನುಭವದ ಅಗತ್ಯತೆಯೂ ಇದೆ. ಮನುಷ್ಯನು ತನ್ನ ಕೈಯ್ಯಲ್ಲೊಂದು ಪದಾರ್ಥವನ್ನು ಹಿಡಿದಾಗ, ಬೆರಳ ತುದಿಗಳ ಚರ್ಮದಲ್ಲಿನ ಅತಿ ಸೂಕ್ಷ್ಮ ನರಗೊಂಚಲು, ಪದಾರ್ಥದ ಒತ್ತಡ, ಉಷ್ಣತೆ ಇತ್ಯಾದಿ ಮಾಹಿತಿಗಳನ್ನು ಮಿದುಳಿಗೆ ನೀಡುತ್ತದೆ. ಇದಕ್ಕೆ ಸಮಾನಾಂತರವಾಗಿ ವಿದ್ಯುತ್ ದೃಗೀಯ (ಇಟeಛಿಣಡಿo ಔಠಿಣiಛಿಚಿಟ) ಅಥವಾ ಪೀಡನ ಪ್ರತಿರೋಧಕ ಸಿದ್ಧಾಂತಗಳನ್ನು ಆಧರಿಸಿ ರೋಬಾಟಿಗೆ ಸ್ಪರ್ಶಾನುಭವ ನೀಡಲಾಗಿದೆ. ರೋಬಾಟ್ ವಸ್ರುವನ್ನು ಮುಟ್ಟಿದಾಗ, ಅದರ ಸುತ್ತಲಿನ ಬೆಳಕಿನಲ್ಲಿ ವ್ಯತ್ಯಾಸ ಉಂಟಾಗುತ್ತದೆ ಮತ್ತು ವಸ್ತುವಿನ ಒತ್ತಡದಿಂದ ಪೀಡನ ಪ್ರತಿರೋಧಕ ಪದಾರ್ಥಗಳು ವಿದ್ಯುತ್ ಪ್ರವಾಹಕ್ಕೆ ಒಡ್ಡುವ ಪ್ರತಿರೋಧಕ ಶಕ್ತಿಯಲ್ಲಿ ಬದಲಾವಣೆಯಾಗುತ್ತದೆ. ಬೆಳಕಿನಲ್ಲಾಗುವ ವ್ಯತ್ಯಾಸವನ್ನು ರೋಬಾಟ್‍ನ ವಿದ್ಯುತ್ ದೃಗೀಯ ವಾಹಕಗಳು ಗ್ರಹಿಸಿ, ಜೊತೆಗೆ ಪ್ರತಿರೋಧಕದಲ್ಲಾದ ಮಾರ್ಪಾಡುಗಳನ್ನು ಗ್ರಹಿಸಿ ರೋಬಾಟ್ ಸ್ಪರ್ಶಾನುಭವವನ್ನು ಪಡೆಯಬಲ್ಲದು.

	ರೋಬಾಟ್‍ನ ಕಾರ್ಯರಂಗ ಬಹಳ ವಿಶಾಲವಾದುದು. ವಿಕಿರಣ ಸ್ಥಳಗಳಲ್ಲಿ, ಬೆಂಕಿ ಹತ್ತಿದ ಸ್ಥಳಗಳಲ್ಲಿ, ಚಿಮ್ಮುವ ತೀವ್ರ ಬೆಳಕಿನ ಬೆಸುಗೆಯ ಕೆಲಸದಲ್ಲಿ, ಸಮುದ್ರದಡಿಯ ಸಂಶೋಧನೆಯ ಕೆಲಸದಲ್ಲಿ, ಅತಿ ಕಿರಿದಾದ ಕಲ್ಲಿದ್ದಲು ಗಣಿ ಕೆಲಸಗಳಲ್ಲಿ ಹೀಗೆ ನಾನಾ ರೀತಿಯ ಕೆಲಸಗಳಿಗೆ ರೋಬಾಟ್ ಅತಿ ಸೂಕ್ತವಾಗುತ್ತದೆ.
ಕಾರ್ಖಾನೆಗಳಲ್ಲಿ ರೋಬಾಟ್:

	ಆರಂಭದಲ್ಲಿ ರೋಬಾಟ್‍ಗಳು ಕೇವಲ ಆಟಿಕೆಗಳಂತಹ ಸ್ವಯಂಚಾಲಿತ ಯಂತ್ರಗಳಾಗಿದ್ದವು. ಕ್ರಮೇಣ ಇವುಗಳ ಯಶಸ್ವೀ ಅಭಿವೃದ್ಧಿಯು ಕಾರ್ಖಾನೆಗಳ ಯಂತ್ರಗಳನ್ನೂ ಅಭಿವೃದ್ಧಿಪಡಿಸಿದವು. 1960ರ ದಶಕದ ಕೊನೆಯಲ್ಲಿ ಕಂಪ್ಯೂಟರ್ ಹಾಗೂ ಎಲೆಕ್ಟ್ರಾನಿಕ್ ರಂಗಗಳಲ್ಲಾದ ಅಭಿವೃದ್ಧಿಯು ರೋಬಾಟಿಕ್ಸ್ ರಂಗದ ಮೇಲೂ ಪ್ರಭಾವ ಬೀರಿತು. ಇಂದು ಕಾರ್ಖಾನೆಗಳಲ್ಲಿ ಕಾಣಬರುವ ರೋಬಾಟುಗಳೆಲ್ಲವೂ ಗಣಕಗಳಿಂದ ನಿಯಂತ್ರಿಸಲ್ಪಟ್ಟಿರುವುದನ್ನು ಗಮನಿಸಬಹುದು. ಕಾರ್ಖಾನೆಗಳಲ್ಲಿ ಅಚ್ಚು ಮಾಡಲು, ಬಿಡಿಭಾಗಗಳನ್ನು ಜೋಡಿಸಲು, ಬೆಸುಗೆ ಹಾಕಲು, ವಿದ್ಯುದ್ಲೇಪನ, ತುಂತುರು ಬಣ್ಣದ ಕೆಲಸ, ಅಪಾಯಕಾರಿ ವಿಕಿರಣ ವಸ್ತುಗಳ ಕೆಲಸ ಇತ್ಯಾದಿಗಳಿಗೆ ರೋಬಾಟ್ ಅಳವಡಿಕೆ ಸಾಧ್ಯವಾಗಿದೆ. ಉದಾಹರಣೆಗೆ, ಬೆಂಗಳೂರಿನ ಬಿ.ಇ.ಎಲ್ ಕಾರ್ಖಾನೆಯ ಎಮ್.ಎಮ್.ಎಫ್ ವಿಭಾಗದಲ್ಲಿ ನಿಗದಿತ ಉತ್ಪನ್ನಗಳಿಗೆ ಬೇಕಾದ, ಮುದ್ರಿತ ವಿದ್ಯುನ್ಮಂಡಲ ಫಲಕಗಳಲ್ಲಿ ಬಿಡಿ ಭಾಗಗಳನ್ನು ನಿರ್ದಿಷ್ಟ ಸ್ಥಾನದಲ್ಲಿ ಜೋಡಿಸಲು ರೋಬಾಟುಗಳನ್ನು ಬಳಸಲಾಗುತ್ತದೆ.

	ಎಚ್.ಎ.ಎಲ್. ಕಾರ್ಖಾನೆಯ ವಿಮಾನ ವಿಭಾಗ, ಅಂತರಿಕ್ಷ ವಿಭಾಗ, ಎಂಜಿನ್ ವಿಭಾಗಗಳಲ್ಲಿ ಗಣಕಗಳಿಂದ ನಿಯಂತ್ರಿಸಲ್ಪಟ್ಟ ಯಂತ್ರಗಳಿವೆ. ಈ ಯಂತ್ರಗಳಿಂದ ತಯಾರಾದ ಅನೇಕ ವಿಮಾನ ಭಾಗಗಳು ನಿಖರವಾದ ಅಳತೆ, ಉತ್ಕøಷ್ಟ ಗುಣಮಟ್ಟವನ್ನು ಹೊಂದಿರುತ್ತವೆ.

	ಕಾರ್ಖಾನೆಗಳಲ್ಲಿ ಬಳಸುವಂತಹ ಹೆಚ್ಚಿನ ರೋಬಾಟ್‍ಗಳನ್ನು ಜಪಾನಿನಲ್ಲಿ ಕಾಣಬಹುದು. ಅಲ್ಲಿ ರೋಬಾಟ್‍ಗಳನ್ನು ತಯಾರಿಸುವ ರೋಬಾಟ್‍ಗಳೇ ಇವೆ. ಕಾರ್ಖಾನೆಯೊಂದರಲ್ಲಿ ಅರವತ್ತು ರೋಬಾಟ್‍ಗಳು ತಿಂಗಳಿಗೆ ತಮ್ಮಂತಹ ತೊಂಬತ್ತು ರೋಬಾಟ್‍ಗಳನ್ನು ತಯಾರಿಸುತ್ತವೆ. ಪ್ರಪಂಚದಲ್ಲೇ ಅತಿ ಹೆಚ್ಚು ರೋಬಾಟ್‍ಗಳನ್ನು ಬಳಸುತ್ತಿರುವ ದೇಶ ಜಪಾನ್ ಎಂದರೆ ತಪ್ಪಾಗಲಾರದು.

ವೈದ್ಯಕೀಯ ಕ್ಷೇತ್ರದಲ್ಲಿ ರೋಬಾಟ್

	ರೋಬಾಟ್‍ಗಳು ವೈದ್ಯಕೀಯ ಕ್ಷೇತ್ರಕ್ಕೂ ಕಾಲಿಟ್ಟಿವೆ. ಶಾಬ್ದಿಕ ಆಜ್ಞೆಗಳಿಂದ ನಿಯಂತ್ರಿಸಲ್ಪಡುವ ರೋಬಾಟ್‍ಗಳು ಶಸ್ತ್ರ ಚಿಕಿತ್ಸೆಯಲ್ಲಿ ನೆರವಾಗಬಲ್ಲವು. ಮನುಷ್ಯನ ಸೂಕ್ಷ್ಮ ಅವಯವದೊಳಗೆ ಹೊಕ್ಕು ಅತಿ ನಾಜೂಕಾದ ಶಸ್ತ್ರ ಚಿಕಿತ್ಸೆ ಮಾಡುವಂತೆ ರೋಬಾಟ್‍ಗಳನ್ನು ಸಿದ್ಧಪಡಿಸಲಾಗುತ್ತಿದೆ. ವೈದ್ಯರಂಗದ ಪ್ರಯೋಗಾಲಯಗಳಲ್ಲಿ ರಕ್ತ, ಮೂತ್ರ ಪರೀಕ್ಷೆಗಳಿಗೆ ರೋಬಾಟುಗಳನ್ನು ಈಗಾಗಲೇ ಬಳಸಲಾಗುತ್ತಿದೆ. ಮುಂದಿನ ವರ್ಷಗಳಲ್ಲಿ ಇವು ಕೀಲು ಹಿಡಿದವರಿಗೆ, ಪಾಶ್ರ್ವವಾಯು ಬಡಿದವರಿಗೆ, ದೈಹಿಕ ವ್ಯಾಯಾಮ ಮಾಡಿಸಲು ನೆರವಾಗುವುದರಲ್ಲಿ ಸಂದೇಹವೇ ಇಲ್ಲ. ಆಸ್ಪತ್ರೆಗಳ ತುಂಬಾ ಓಡಾಡುತ್ತಾ, ರೋಗಿಗಳ ಸೇವೆಗಿಳಿದು, ಮುದುಕರ-ರೋಗಿಗಳ ಸೇವಕನಂತೆ ಹಾಗೂ ಸ್ನೇಹಿತನಂತೆ ಕೆಲಸ ಮಾಡುವುದನ್ನು ನೋಡುವುದರಲ್ಲಿಯೂ ಆಶ್ಚರ್ಯವಿಲ್ಲ.

ವ್ಯವಸಾಯದಲ್ಲಿ ರೋಬಾಟ್

	ರೋಬಾಟನ್ನು ವ್ಯವಸಾಯ, ತೋಟಗಾರಿಕೆಗಳಲ್ಲೂ ಬಳಸಲಾಗುತ್ತಿದೆ. ಕ್ಯಾಲಿಫೋರ್ನಿಯಾದಲ್ಲಿ ಬಹು ಕಠಿಣವಾದ ಆಸ್ಪರಾಗಸ್ ಗಿಡಗಳ ಸಾಗುವಳಿಯಲ್ಲಿ ಕೆಲಸಗಾರರು ಸೊಂಟ ಬಗ್ಗಿಸಿ, ಸಾಲುಗಳಲ್ಲಿ ಸಾಗುತ್ತಾ, ಗಿಡದ ದಂಟನ್ನು ಒಂದೇ ಎತ್ತರಕ್ಕೆ ಕತ್ತರಿಸಿ, ಬೆನ್ನಿಗೆ ಹಾಕಿಕೊಂಡ ಬುಟ್ಟಿಯಲ್ಲಿ ಜಾಗರೂಕತೆಯಿಂದ ಹಾಕಬೇಕು ಮತ್ತು ಉರಿವ 100ಲಿಈ ಹವೆಯಲ್ಲಿ ಮುಂಜಾನೆ ಮಾತ್ರ ಕೆಲಸ ಮಾಡಬೇಕು ಎಂಬ ನಿಯಮಗಳಿವೆ. ಈ ಕಷ್ಟಕರ ನಿಯಮಗಳನ್ನು (ನಿರಂತರವಾಗಿ) ಪಾಲಿಸುವಲ್ಲಿ ಜನರು ವಿಫಲರಾಗಬಹುದು. ಬದಲಿಗೆ ರೋಬಾಟ್‍ಗಳನ್ನು ಬಳಸಿದಾಗ, ಅವು ಬಿಸಿಲಿನ ಗಣನೆ ಇಲ್ಲದೆ, ಬೆವರಿನ ಚಿಂತೆ ಇಲ್ಲದೆ ತೋಟಗಳಲ್ಲಿ ಹಣ್ಣುಗಳನ್ನು ಕೀಳುತ್ತವೆ. ಎಲೆ, ಹೀಚುಗಳನ್ನು ಸರಿಸಿ ಮಾಗಿದ ಹಣ್ಣುಗಳನ್ನಷ್ಟೆ ನಿಖರವಾಗಿ ತಮ್ಮ ಬಣ್ಣದ ಕ್ಯಾಮೆರಾ ಕಣ್ಣುಗಳಿಂದ ಗುರುತಿಸಿ, ಕೀಳುತ್ತವೆ.

ಸಮುದ್ರದಾಳದಲ್ಲಿ ರೋಬಾಟ್

	ಇಂದು ಸಮುದ್ರದಾಳದ ಅನ್ವೇಷಣೆಗಳಿಗೆ, ಸಂಶೋಧನೆಗಳಿಗೆ ರೋಬಾಟ್‍ಗಳು ಅನಿವಾರ್ಯವಾಗಿವೆ.

	1912ರಲ್ಲಿ ನೀರ್ಗಲ್ಲಿಗೆ ಢಿಕ್ಕಿ ಹೊಡೆದು ಸಾವಿರಾರು ಜನರೊಡನೆ ಜಲಸಮಾಧಿಯಾದ ಟೈಟಾನಿಕ್ ಹಡಗಿನ ಅವಶೇಷಗಳನ್ನು ಹುಡುಗಿ, ಗುರುತಿಸಿ, ಅದರ ಛಾಯಾಚಿತ್ರಗಳನ್ನು ತರುವುದರಲ್ಲಿ ರೋಬಾಟ್‍ಗಳು ಯಶಸ್ವಿಯಾದವು. ಆಲ್ವಿನ್ ಜಲಾಂತರ್ಗಾಮಿ ವಾಹನ ಮೂರು ಜನರನ್ನು ಹೊತ್ತು ನೀರಿಗಿಳಿಯಿತು. ಆಲ್ವಿನ್‍ಗೆ ಜಾಸನ್ ಜೂನಿಯರ್ ಎಂಬ ದೂರ ನಿಯಂತ್ರಣ ರೋಬಾಟನ್ನು ಜೋಡಿಸಲಾಗಿತ್ತು. ಈ ರೋಬಾಟ್ ಸ್ಥಿರಚಿತ್ರಗಳ ಕ್ಯಾಮೆರಾ, ವಿಡಿಯೋ ಕ್ಯಾಮೆರಾ, ದಿಕ್ಸೂಚಿ, ಸ್ಟ್ರೋಬ್ ಲೈಟ್, ಆಳವನ್ನು ತಿಳಿಯುವ ಸಂವೇದಕ ಇತ್ಯಾದಿಗಳನ್ನು ಹೊಂದಿತ್ತು. ಆಲ್ವಿನ್‍ನ ಚಾಲಕನೇ ಇದನ್ನು ನಿಯಂತ್ರಿಸುತ್ತಿದ್ದ. ನಿಯಂತ್ರಣಕ್ಕೆ ತಕ್ಕಂತೆ ಜಾಸನ್ ತನ್ನ ಪ್ರಖರ ದೀಪಗಳನ್ನು ಹೊತ್ತಿಸಿ ಟೈಟಾನಿಕ್ ಭಾಗಗಳನ್ನು ಬೆಳಗಿ ಅದ್ಭುತ ಚಿತ್ರಗಳನ್ನು ತೆಗೆಯಿತು. ಜೊತೆಗೆ ಹಡಗಿನ ಭಾಗಗಳಿಂದ ಸಂಗ್ರಹವಾದ ಮಾಹಿತಿಯನ್ನು ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ವಿಶ್ಲೇಷಿಸಿ ದಾಖಲಿಸಲಾಯಿತು. ರೋಬಾಟ್ ಸಹಾಯದಿಂದಾಗಿಯೇ ಹಡಗಿನ ಮೈಭಾಗದ ಒಂದು ಅಂಗುಲ ದಪ್ಪದ ಸ್ಟೀಲಿನ ತುಂಡನ್ನು 13000 ಅಡಿಗಳಷ್ಟು ಆಳದಿಂದ ಎತ್ತಿ ಮೇಲೆ ತರಲು ಸಾಧ್ಯವಾಯಿತು.

	ಅನಂತರದ ಕಾನಿಷ್ಕ ವಿಮಾನ ದುರಂತದಲ್ಲೂ ಸಮುದ್ರದ ತಳ ಸೇರಿದ ವಿಮಾನದ ಭಾಗಗಳನ್ನು ಶೋಧಿಸಿ ತರಲು ರೋಬಾಟನ್ನೇ ಉಪಯೋಗಿಸಲಾಗುತ್ತಿದೆ.
ಪೊಲೀಸ್ ಮತ್ತು ಮಿಲಿಟರಿಯಲ್ಲಿ ರೋಬಾಟ್

 	ಈ ಕ್ಷೇತ್ರಗಳಲ್ಲಿ ರೋಬಾಟ್‍ಗಳನ್ನು ಬಳಸುವುದು ಬಹಳ ಸಹಾಯಕಾರಿ ಹಾಗೂ ಸುರಕ್ಷಿತ. ಸ್ಫೋಟಿಸುವ ಬಾಂಬ್ ಇರುವ ಕಟ್ಟಡದಿಂದ ಬಾಂಬನ್ನು ಆಸ್ಫೋಟಿಸದಂತೆ ರೋಬಾಟ್ ತರಬಲ್ಲದು. ಜೊತೆಗೆ ಶತ್ರುಗಳ ಬಗೆಗಿನ ಮಾಹಿತಿ ಸಂಗ್ರಹಕ್ಕೆ ಈ ರೋಬಾಟ್‍ಗಳನ್ನು ಗೂಢಚಾರಿಯಂತೆ ಬಳಸಬಹುದು. ಸಾಕಷ್ಟು ಹಿಂದೆಯೇ ಬ್ರಿಟಿಷ್ ಸೇನೆ ಗೂಢಚಾರ ರೋಬಾಟ್ ವಿಮಾನವನ್ನು ತಯಾರಿಸಿತ್ತು. ಈಗ ಬಹಳಷ್ಟು ದೇಶಗಳು ಚಾಲಕನಿಲ್ಲದ ವಿಮಾನಗಳನ್ನು ಹೊಂದಿದ್ದು, ಇವು ಶಾಂತಿಕಾಲದ ಕೆಲಸಗಳಿಗೂ, ಮಿಲಿಟರಿ ಕೆಲಸಗಳಿಗೂ ಬಳಕೆಯಾಗುತ್ತಿವೆ.
ಪಶುಪಾಲನೆಯಲ್ಲಿ ರೋಬಾಟ್

	ಆಸ್ಟ್ರೇಲಿಯಾದಲ್ಲಿ ಕುರಿಸಾಕಣೆಗೆ ರೋಬಾಟ್‍ಗಳನ್ನು ಬಳಸುತ್ತಾರೆ. ಕಾರಣವೆಂದರೆ ಇಲ್ಲಿನ ಕುರಿಗಳ ತುಪ್ಪಟವನ್ನು ಮನುಷ್ಯರು ಹೆರೆಯುವಾಗ, ಅನೇಕ ಬಾರಿ ಅವುಗಳಿಗೆ ಗಾಯಗಳಾಗುತ್ತದೆ. ಜೊತೆಗೆ ಕುರಿಗಳ ಸಂಖ್ಯೆಯು ಅತ್ಯಧಿಕವಾಗಿರುವುದರಿಂದ, ಕುರಿಗಳ ತುಪ್ಪಟ ತೆಗೆಯಲು ರೋಬಾಟ್‍ಗಳನ್ನು ಬಳಸುವುದು ಕುರಿಸಾಕಣೆಯನ್ನು ಸುಲಭಗೊಳಿಸುತ್ತದೆ. ಕುರಿಯನ್ನು ರೋಬಾಟ್ ಮೃದುವಾಗಿ ಹಿಡಿದು, ಅದರ ಚರ್ಮದಿಂದ 0.005 ಅಂಗುಲ ಬಿಟ್ಟು ಉಣ್ಣೆ ತೆಗೆಯುತ್ತದೆ. ಕುರಿ ಉಸಿರಾಡುವಾಗ, ಚಲನೆಗಳು ಉಂಟಾದರೆ ಜಾಗರೂಕವಾಗಿ ಕತ್ತರಿಯನ್ನು ಹಿಂತೆಗೆದುಕೊಳ್ಳುತ್ತದೆ.

ಅಂತರಿಕ್ಷದಲ್ಲಿ ರೋಬಾಟ್

	ಇತರ ಕ್ಷೇತ್ರಗಳಂತೆ, ಅಂತರಿಕ್ಷ ಶೋಧನೆ ಹಾಗೂ ಮಾಹಿತಿ ಸಂಗ್ರಹಕ್ಕೆ ರೋಬಾಟ್‍ಗಳು ಸುರಕ್ಷಿತ ಸಾಧನಗಳಾಗಿವೆ. ಮಂಗಳದ ಅಂಗಳದಲ್ಲಿ ಇಳಿದ ಸೋಜರ್ನರ್ ರೋಬಾಟ್, ಅಲ್ಲಿನ ಕಲ್ಲುಗಳನ್ನು ಹೆಕ್ಕಿ ಪರೀಕ್ಷಿಸಿ, ಅಮೂಲ್ಯವಾದ ಮಾಹಿತಿಗಳನ್ನು ಭೂಮಿಗೆ ಕಳುಹಿಸುವ ಅದ್ಭುತ ಕಾರ್ಯವನ್ನು ಮಾಡಿತು. ಈ ರೋಬಾಟ್‍ನಲ್ಲಿ ಸಾಕಷ್ಟು ಗಣಕಗಳು ಮತ್ತು ಸಂವೇದಕಗಳು ಮುಂತಾದ ಎಲೆಕ್ಟ್ರಾನಿಕ್ ಸಲಕರಣೆಗಳು ಇದ್ದವು. ರೋಬಾಟ್‍ನಲ್ಲಿದ್ದ ಆಲ್ಫಾ ಪ್ರೋಟಾನ್ ಕ್ಷ-ಕಿರಣ ಸಲಕರಣೆಯಿಂದಲೇ ಮಣ್ಣು-ಕಲ್ಲುಗಳಲ್ಲಿದ್ದ ಮೂಲಧಾತುಗಳ ಸಂಯೋಜನೆಯನ್ನು ಅಳತೆ ಮಾಡಿ ಭೂಮಿಗೆ ರವಾನಿಸುವುದು ಸಾಧ್ಯವಾಯಿತು.

ಕೃತಕ ಬುದ್ಧಿವಂತಿಕೆಯ ರೋಬಾಟ್

1950ರಲ್ಲಿ ಬ್ರಿಟಿಷ್ ಗಣಿತಜ್ಞ ಮತ್ತು ಗಣಕ ವಿಜ್ಞಾನಿ ಆಲನ್ ಟ್ಯೂರಿಂಗ್, ಮುಂದೆ ಮನುಷ್ಯನ ಬುದ್ಧಿವಂತಿಕೆಯನ್ನು ನಕಲು ಮಾಡಬಲ್ಲ ಯಂತ್ರ ಸೃಷ್ಟಿಯಾಗಲಿದೆ ಎಂದು ಘೋಷಿಸಿದ್ದ. ಅವನ ಘೋಷಣೆಯಿಂದ ಸ್ಫೂರ್ತಿಗೊಂಡು, 1956ರಲ್ಲಿ ಕೃತಕ ಬುದ್ಧಿವಂತಿಕೆಯ ಸಮ್ಮೇಳನ ನ್ಯೂ ಹ್ಯಾಂಡ್‍ಶೈಯರ್‍ನಲ್ಲಿ ನಡೆಯಿತು. ಇದಾದ ಕೆಲವೇ ಸಮಯದಲ್ಲಿ ಮಸಾಚುಸೆಟ್ಸ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸಂಸ್ಥೆಯಲ್ಲಿ ಕೃತಕ ಬುದ್ಧಿವಂತಿಕೆಯ ಪ್ರಯೋಗಶಾಲೆ ಆರಂಭವಾಯಿತು. ಈ ಕ್ಷೇತ್ರದಲ್ಲಿ ಹೆಚ್ಚಿನ ಸಂಶೋಧನೆಗಳು ನಡೆಯುತ್ತಿದ್ದು, ಕೃತಕ ಬುದ್ಧಿವಂತಿಕೆಯ ರೋಬಾಟ್‍ಗಳನ್ನು ತಯಾರಿಸುವುದು ಇನ್ನೂ ಸಾಧ್ಯವಾಗಿಲ್ಲ.

ಆದರೂ ಈಗ ತಯಾರಿಸಲ್ಪಡುವ ಎಲ್ಲ ರೋಬಾಟ್‍ಗಳಿಗೂ ಗಣಕದ ಮಿದುಳಿದೆ. ಅಂದರೆ ಇದರಲ್ಲಿನ ಗಣಕವು ರೋಬಾಟ್‍ನ ಪ್ರತಿ ಅಂಗವನ್ನೂ ನಿಯಂತ್ರಿಸುತ್ತದೆ. ಗಣಕದ ಸ್ಮರಣ ವಿಭಾಗದಲ್ಲಿ ಅಗಾಧ ಮಾಹಿತಿಯನ್ನು ಸಂಗ್ರಹಿಸಬಹುದು. ಹೀಗೆ ಮನುಷ್ಯನ ಬುದ್ಧಿವಂತಿಕೆಯಿಂದಾಗಿ, ರೋಬಾಟ್‍ಗಳು ಎಲ್ಲ ಕ್ಷೇತ್ರಗಳಲ್ಲೂ ನುಗ್ಗಿ ಬುದ್ಧಿವಂತ ರೋಬಾಟ್‍ಗಳಾಗುತ್ತಿವೆ.
(ಪರಿಷ್ಕರಣೆ: ನೇಮಿಚಂದ್ರ)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ